ಅಂಕಣ ಸಂಗಾತಿ

ತೊರೆಯ ಹರಿವು

‘ಸಾವಿಗೊಂದು ಘನತೆ ಕೊಡುವ…’

   ಅಪ್ಪು ಎಂಬ ಮನದ ಮಗನ ಸಾವಿಗೆ ಕರ್ನಾಟಕ ಇನ್ನಿಲ್ಲದಂತೆ ಕೊರಗುತ್ತಿದೆ. ‘ಈ ಸಾವು ನ್ಯಾಯವೇ ?’ ಎಂದು ಪ್ರಶ್ನಿಸುತ್ತಿದೆ. ‘ಸಾಯೋ ವಯಸ್ಸಾ ಇದು? ವಿಧಿಗೆ ಕುರುಡೇ? ಯಮನ ಕಿಂಕರರಿಗೆ ಕರುಣೆ ಇಲ್ಲವೇ?’ ಎಂದೆಲ್ಲಾ ನೂರಾರು ಪ್ರಶ್ನೆಗಳನ್ನು ಎಲ್ಲರ ಮನಸ್ಸು ಜಗ್ಗಿ ಕೇಳುತ್ತಿದೆ. ಇದಂತೂ ಈ ಕಾಲಮಾನದಲ್ಲಿನ ಎಲ್ಲಾ ವಯೋಮಾನದವರ ಮನದಲ್ಲಿ ಉಳಿದು ಹೋದ ಅಹಿತಕರ ಘಟನೆ. ಯಾರೂ ಊಹಿಸದಿದ್ದ ಆಘಾತ!

   ‘ಹುಟ್ಟಿದ ಮೇಲೆ ಸಾವು ಸಹಜ’ ಎಂದರೂ  ಬಾಳಿ ಬದುಕಬೇಕಾದ ಒಂದು ಒಳಿತಿನ ಜೀವಕ್ಕೆ  ಇಂಥದ್ದೊಂದು ಸಾವು ಬಂದುದನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೊಂದು ಎಂದಿಗೂ ಮಾಯದ ಗಾಯ. ಪುನೀತ್ ಕೇವಲ ನಟನಾಗಿದ್ದರೆ ಸಿನಿಪ್ರಿಯರಿಗೆ, ಅಭಿಮಾನಿಗಳಿಗೆ ಹೆಚ್ಚು ದುಃಖವಾಗುತ್ತಿದ್ದಿರಬಹುದು. ಆದರೆ ಜನಾನುರಾಗಿಯೂ ಹೃದಯವಂತನೂ ಆದ ಚೆಂದದ ವ್ಯಕ್ತಿಯೊಬ್ಬರ ಈ ಸಾವು ಎಲ್ಲಾ ವಯೋಮಾನದವರನ್ನೂ ಕಾಡಿದೆ. ಇಂಥಾ ದಿಢೀರ್ ಸಾವಿಗೆ  ಕಾರಣವನ್ನು ಹುಡುಕುತ್ತಿದೆ.

   ಸಾವು ಸಹಜ ಎಂದ ಮೇಲೆ ಅದು ಬಂದಂತೆ ಸಹಜವಾಗಿ ಸ್ವೀಕರಿಸಬೇಕು ಎಂದು ಹೇಳುವುದು ಸುಲಭ. ಆದರೆ ಅಕಾಲದ ಸಾವನ್ನು ಸ್ವೀಕರಿಸುವುದು ಹೇಗೆ? ಅಕಾಲದ ಸಾವೆಂದರೆ ಏನು? ಸಾವಿಗೆ ಕಾಲ ಎನ್ನುವುದಿದೆಯೇ? ಎಂಬೆಲ್ಲಾ ಜಿಜ್ಞಾಸೆಗೆ ಮನ ತುಡಿಸುತ್ತದೆ.

   ನಮ್ಮ ಹಿರಿಯರು ಹೇಳುವಂತೆ ಅಥವಾ ನಾವು ಬೆಳೆದು ಬಂದ ರೂಢಿಯಲ್ಲಿ ತುಂಬು ಬಾಳನ್ನು ಅಪೇಕ್ಷಣೀಯ ಎನ್ನಲಾಗುತ್ತದೆ. ಇಲ್ಲಿ ‘ತುಂಬು ಬಾಳು ತುಂಬಿರುವ ತನಕ ತುಂಬಿ ತುಂಬಿ ಕುಡಿಯಬೇಕು’ ಎನ್ನುವ ಹಿರಿಮನಸ್ಸಿನ ಹಾರೈಕೆಯಿರುತ್ತದೆ. ‘ ಶತಮಾನಂ ಭವತಿ ಶತಾಯುಹ್ ಪುರುಷಃ ಶತೇಂದ್ರಿಯಃ ಆಯುಶ್ಯೇವೇಂದ್ರಿಯೇ ಪ್ರತಿತಿಷ್ಠತಿ’ ಎಂಬುದು ದೀರ್ಘಾಯುಶ್ಯ ಹಾಗೂ ಉತ್ತಮ ಆರೋಗ್ಯ ಹೊಂದಿರಿ ಎಂಬ ಸದಾಶಯ ಹೊಂದಿರುವ ಆಶೀರ್ವಾದ ಸ್ವರೂಪದ ಮಂತ್ರವನ್ನು ಆಗಾಗ್ಗೆ ಕೇಳುವ ಆಚರಣೆಗಳ ಜೊತೆ ಜೊತೆಗೆ ಬೆಳೆದು ಬಂದಿರುತ್ತೇವೆ. ಕೊನೆಗೆ ‘ನೂರು ವರ್ಷ ಸುಖವಾಗಿ ಬಾಳಿದರು’ ಎಂಬ ಸುಖಾಂತ್ಯವೇ ಆಗಿರಬೇಕೆನ್ನುವ ಅಪೇಕ್ಷೆಯಲ್ಲೇ ಎಲ್ಲಾ ಕತೆಗಳನ್ನು ಹೆಣೆಯುತ್ತೇವೆ. 

       ಪುರಾಣಗಳಲ್ಲಿ ‘ಚಿರಂಜೀವಿ’ಗಳನ್ನು ಹುಟ್ಟಿಸಿ ವಿಚಿತ್ರ ಸಮಾಧಾನಪಡುವವರು ನಾವು. ‘ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ‘ ಎಂದು ಅವರನ್ನು ಹೆಸರಿಸುವ ಸಂಸ್ಕೃತ ಶ್ಲೋಕವಿದೆ. ಚಿರಂಜೀವಿಗಳಾಗಿರಿ, ಆಯುಶ್ಮಾನ್ಭವ ಎಂದು ಆಶೀರ್ವದಿಸುವ ರೂಢಿ ನಮ್ಮಲ್ಲಿದೆ.

   ಹೀಗಿರುವಾಗ, ಅಪಘಾತದ ಸಾವುಗಳು, ಅನಾರೋಗ್ಯದ ಕಾರಣಕ್ಕೆ ಬರುವ ಸಾವುಗಳನ್ನು ಸ್ವೀಕರಿಸುವ ಬಗೆ ಹೇಗೆ? ಮನಸ್ಸು ಯಾವಾಗಲೂ ದೀರ್ಘಾಯುಷ್ಯಕ್ಕೆ ಸಿದ್ಧವಾಗಿರುವಾಗ ಅಪಘಾತ, ಅನಾರೋಗ್ಯದ ಕಾರಣ ಅಕಾಲಿಕ ಸಾವು ಬಂದರೆ?! ಅಂಥ ಸಂದರ್ಭಗಳಲ್ಲಿ ನಮ್ಮ ಕೈ ಮೀರಿದ ವಿಷಯಕ್ಕೆ ಅತೀವ ದುಃಖವಾಗುವುದು ಸುಳ್ಳಲ್ಲ.

  ದೇಶಗಳ ಆಂತರಿಕ ರಾಜಕೀಯ ಕಲಹಕ್ಕೆ ಬಲಿಯಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಸತ್ತ ಪುಟ್ಟ ಸಿರಿಯನ್ ಬಾಲಕ ‘ಅಲಾನ್ ಕುರ್ದಿ’ ಆಗಲಿ, ಭಾರತ ಯುದ್ಧದಲ್ಲಿ ವೀರ ಮರಣಕ್ಕೆ ಒಳಗಾದ ಪದೇ ಪದೇ ನೆನಪಿಗೆ ಬರುವ ‘ವೀರ ಅಭಿಮನ್ಯು’ವಾಗಲೀ, ಕೆವಿನ್ ಕಾರ್ಟರನ ಪುಲಿಟ್ಚರ್ ಪ್ರಶಸ್ತಿಯ ಚಿತ್ರದೊಳಗಿನ ಅಪೌಷ್ಠಿಕಾಂಶದ ‘ಆಫ್ರಿಕಾದ ಮಗು’ ವಾಗಲಿ, ಮಹಾಯುದ್ಧದ ಕ್ರೂರ ನೆನಪಾಗಿ ಕಾಡುವ ಅಣುಬಾಂಬಿನ ದಾಳಿಗೆ ಸಿಲುಕಿದ ಆ ಎರಡು ನಗರಗಳ ಕಂದಮ್ಮಗಳಾಗಲಿ.. ಅಕಾಲದ ಸಾವಿಗೆ ವಿನಾಕಾರಣ ಬಲಿಯಾದವರು. ಇಂಖಾ ಸಾವುಗಳು ಇಡೀ ಮನುಕುಲವನ್ನು ಕಾಡುತ್ತವೆ.

   ಹಾಗೆ ಕಾಡುವ ದೂರ ದೇಶಗಳ, ಇತಿಹಾಸ ಪುರಾಣಗಳ ಸಾವುಗಳ ನಡುನಡುವೆ ನಮ್ಮ ಸುತ್ತಳತೆಯಲ್ಲಿ ಘಟಿಸಿಬಿಡುವ ಪುನೀತರಂತಹ ಅದಮ್ಯ ಚೇತನಗಳ ಸಾವು ಕಂಗೆಡಿಸಿ ತಲ್ಲಣಗೊಳಿಸುತ್ತವೆ. ಹುಟ್ಟಿದ ಜೀವಿಗಳಿಗೆ ಸಾವು ಅನಿವಾರ್ಯವೇ. ಆದರೆ ಅದನ್ನು ನಿರೀಕ್ಷಿಸುತ್ತಾ ಯಾರೂ ಕುಳಿತಿರಲಾರರು. ಸಾವಿನಂತಹ ಅಂತಿಮ ಸತ್ಯವನ್ನು ಅರಿತಿದ್ದರೂ ಅದರ ರೀತಿ ರಿವಾಜುಗಳನ್ನು ನಮ್ಮ ಬಾಲಿಶ ಮನಸ್ಸು ಸ್ವೀಕರಿಸಲು ತಯಾರಿರುವುದಿಲ್ಲ. ವಾರ ಕಳೆದರೂ ಗರ ಬಡಿದಂತಿರುವ ಮನಸ್ಸಿಗೆ ದಿಕ್ಕು ತೋಚದಂತಾಗಿ ಬಿಡುವುದು ಸತ್ಯವೇ. ಆದರೂ ಈ ಅನಿರೀಕ್ಷಿತ ಆಘಾತದ ಸಂದರ್ಭದಲ್ಲಿ ದುಡುಕಿನ ಕೈಗೆ ಮತಿಕೊಟ್ಟು ಮಂಕಾದ ಮನಸ್ಥಿತಿಯಲ್ಲಿ ನಮ್ಮ ಸಾವಿಗೆ ನಾವೇ ಆಹ್ವಾನ ಕೊಡುವುದಿದೆಯಲ್ಲ ಅದೊಂದು ಪರಮ ಮೂರ್ಖತನದ ಕೆಲಸ. ಈಗಾಗಲೇ ಹಲವಾರು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದು ನಿಜಕ್ಕೂ ಬೇಸರದ ವಿಚಾರ.

     ಯಾವ ನೋವುಗಳೂ ಶಾಶ್ವತವಾಗಿರುವುದಿಲ್ಲ. ಸುಖ ದುಃಖಗಳು ಬಾಳಿನೆರಡು ಮುಖಗಳು. ಇದೊಂದು ಗಳಿಗೆ ಇದ್ದರೆ ಅದೊಂದು ಗಳಿಗೆ ಇರುತ್ತದೆ. ಇಂಗ್ಞೀಶಿನಲ್ಲಿ ಒಂದು ಪದವಿದೆ passing clouds ಎಂದು. ಇದನ್ನು ಯಾವುದಕ್ಕೂ ಹೋಲಿಸಬಹುದು. ಸುಖವಾಗಲಿ ದುಃಖವಾಗಲಿ ಸ್ಥಿರವಲ್ಲ. ಬೇಸರ ಭಾವ ಯಾವತ್ತಿಗೂ ಸ್ಥಿರವಲ್ಲ. ಹಾಗೆಯೇ ಸುಖವೂ ಶಾಶ್ವತವಲ್ಲ. ಇದನ್ನು ತಿಳಿದ ನಮ್ಮ ಹಿರಿಯರು ಬದುಕನ್ನು ಚಕ್ರಕ್ಕೆ ಹೋಲಿಸಿದ್ದರು. ಗಾಲಿ ಸುತ್ತುತ್ತಿರುವಾಗ ಬಂಡಿಯು ಚಲಿಸುವಂತೆ, ಜೀವನ ಚಕ್ರವು ಚಲಿಸಲು ಸುಖವೊಮ್ಮೆ ದುಃಖವೊಮ್ಮೆ ಮೇಲಾಟವಾಡಬಹುದು. ನಿರಂತರವಾಗಿ ಯಾವ ಅಡೆತಡೆಯೂ ಇಲ್ಲದೆ ಗುರಿಯನ್ನು ಮುಟ್ಟುವಂತೆ ಬದುಕಿನ ಬಂಡಿ ಚಲಿಸುವುದು ಅಸಾಧ್ಯ. ಸರ್ವ ಜೀವಿಗಳಿಗೂ ಅದರದ್ದೇ ಆದ ಕಷ್ಟಸುಖಗಳಿರುತ್ತವೆ. ಯಾವಾಗಲೂ ಒಂದೇ ರೀತಿಯ ಜಡಭಾವದಲ್ಲಿ ಬದುಕಲಾಗದು. ಚಲಿಸುವ ಗಾಲಿಯಂತೆ ನಮ್ಮ ಜೀವನ ಚಕ್ರವೂ ಚಲಿಸುತ್ತಿರಬೇಕು. ಬೆಳಕಿನಂಥ ಬುದ್ಧಿಯನ್ನಾವರಿಸುವ ಕತ್ತಲೆಯಂತಹ ಕ್ರೋಧ, ಮಂಕುತನವನ್ನು ನಿವಾರಿಸಿಕೊಳ್ಳಬೇಕು. ಮಬ್ಬು ಹಿಡಿಸುವ ಆಲೋಚನೆಗಳಿಂದ ಕಷ್ಟಪಟ್ಟಾದರೂ ಹೊರಬರಬೇಕು. ವಿಚಾರದ ಯೋಗ್ಯ ನಿರ್ಣಯಕ್ಕೆ ಮನಸ್ಸನ್ನು ತಾಲೀಮುಗೊಳಿಸಬೇಕು. 

  ಈಗೀಗಂತೂ ಆತ್ಮಹತ್ಯೆಗಳು, ಕೊಲೆಗಳು ತೀರಾ ಸಾಮಾನ್ಯ ಎನ್ನುವಂತಾಗಿಬಿಟ್ಟಿವೆ. ‘ಕೊಂದರೆ ತೀರಿತೆ ಮಂದಿಯ ದುಃಖ!’ ‘ಆತ್ಮಹತ್ಯೆಯಿಂದ ಸಿಗುವುದೇ ನೋವಿಗೆ ಅಂತ್ಯ!’ ಎಂದು ಯಾರು ಯಾರನ್ನೋ ಕೇಳಬೇಕಾಗಿಲ್ಲ. ನಮ್ಮ ಮನಗಳನ್ನು ಸಂತೈಸಿಕೊಳ್ಳಬೇಕಾದ ಕಾಲವಿದು. ನಮ್ಮೊಡನೆ ಇರುವ ಕುಟುಂಬಕ್ಕೆ, ನಾವು ಬದುಕುತ್ತಿರುವ ಸಮಾಜಕ್ಕೆ ಜವಾಬ್ದಾರರಾಗಿರುವ ಬದ್ಧತೆ ನಮಗಿರಬೇಕು. ಕಳೆದುಕೊಂಡವರ ನೋವನ್ನು ಇತರರು ಹಂಚಿಕೊಳ್ಳಲಾಗದು. ‘ದುಃಖ ಭರಿಸುವ ಶಕ್ತಿ ಸಿಗಲಿ’ ಎಂಬ ನಾಲ್ಕು ಸಮಾಧಾನದ ಮಾತನಾಡುವ ಸಂದರ್ಭದಲ್ಲಿ ನಮ್ಮ ದುಡುಕಿನ ನಿರ್ಧಾರಗಳು ನೊಂದವರ ಹೃದಯವನ್ನು ಮತ್ತಷ್ಟು ಭಾರಗೊಳಿಸಬಾರದು. ಸಾವು ಬಂದಾಗ ಬರಲಿ. ಬಂದೇ ತೀರುವ ಅತಿಥಿಯನ್ನು ಇಂದೇ ಕರೆಯುವ ಹಠ ಯಾರಿಗೂ ಬೇಡ. ತಾನಾಗಿ ಬರಲಿರುನ ಸಾವಿಗೊಂದು ಘನತೆಯ ಬದುಕನ್ನು ಕಟ್ಟಿ ಕೊಡುವ…


– ವಸುಂಧರಾ ಕದಲೂರು .

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

2 thoughts on “

  1. ಆಪ್ತ ಬರಹ ಬೇಡ ಅಂದರೂ ಬಂದೇ ತೀರುವ ಸಾವು ಎಂಬ ಅತಿಥಿಯನ್ನು ಇಂದೇ ಕರೆಯುವ ಹಠವೇಕೆ? ನಿಜ! ಬಂದಾಗ ಬರಲಿ ಸಾವು, ತಾನಾಗಿ ಬರಲಿರುವ ಸಾವಿಗೊಂದು ಘನತೆಯ ಬದುಕನ್ನು ಕಟ್ಟಿ ಕೊಡುವುದರತ್ತ ಇರಲಿ ಎಲ್ಲರ ಚಿತ್ತ…

Leave a Reply

Back To Top